ವರವರರಾವು
(ತೆಲುಗು)
೧
ಹೇಳಹೆಸರಿಲ್ಲದವರ
ಕ್ರಾಂತಿವೀರರನಾಗಿಸಿದರೆ
ಸುಮ್ಮನಿರುವುದೇ ದೇಶ
ವೀರರಿಗೊಂದು ಚರಿತ್ರೆ ಬೇಕು
ಕಾಡುಮಾನವರೆಲ್ಲ ಸೇರಿ
ಲಾಠಿ ಕಲ್ಲು ಸುಣ್ಣ ಸಿಮೆಂಟು ಕಲಸಿ
ಕಟ್ಟಿದಾಕ್ಷಣಕ್ಕೆ ಅದು ಚರಿತ್ರೆಯಾಗುವುದೇ
ಚರಿತ್ರೆಗೊಂದು ಅಡಿಪಾಯ ಬೇಕು
ಗುಂಡುಗಳಿಂದ ಹಾರಿಸಿದ
ತುಂಡುಬಟ್ಟೆಯ ಗೊಂಡರಿಗೆ
ಬೆಟ್ಟದ ಮೇಲೆ ದೀಪ ಹಚ್ಚುವೆಯಾ
ದೊಡ್ಡವರಿಗೇ ದೀಪ ಹಚ್ಚಬೇಕು
೨
"ಹೌದು ನನ್ನ ಕೇಳಿದರೂ ಅವರದೇ ಊರೆಂದು ಹೇಳುವುದಿಲ್ಲ
ಎಲ್ಲ ಊರುಗಳ ಕಟ್ಟಿ
ಕಾಡೊಡಲಿಗೆ ಹೊರಟುಹೋದವರು
ಅರವತ್ತೋ ಹದಿಮೂರೋ
ನನ್ನ ಕೇಳಿದರೆ ನಕ್ಷತ್ರಗಳ ತೋರಿಸುವೆ
ನೀನಾದರೆ ನಷ್ಟ ಪರಿಹಾರದ ಲಿಸ್ಟು ತೋರಿಸುವೆ
ತಾಯಿ ಹೆತ್ತು ಕಾಡಲ್ಲಿ ಬಿಸುಟ ಅವನಿಗೆ
ಹೊಕ್ಕುಳ ಸೀಳಿ ಹೆಸರಿಟ್ಟವರಾರು
ಮೊದಲಿಗೆ ಜನಸಂಖ್ಯೆಯ ಲೆಕ್ಕಕ್ಕೆ ಸೇರಿಸಿದೆಯೊ
ಓಟರುಗಳ ಲಿಸ್ಟಿಗೇರಿಸಿದೆಯೊ
ಆದಿಲಾಬಾದು ಆಸ್ಪತ್ರೆಯಲಿ ಮುಗಿಸಿದೆಯೊ
ಇಂದಿನ ಸ್ಮಾರಕದೊಂದಿಗೆ ಅಳಿಸಿದೆಯೊ - ಆದರೂ
ಅವು ಹೆಸರುಗಳಲ್ಲ
ಕಾಡುಗಂಟೆ, ಬೆಟ್ಟ ಕಣಿವೆ
ಹಾವು ಹಕ್ಕಿ ನೀರು ಬೆಂಕಿ
ಮೇಕೆ ಮಾನವ ಮನೆ ಮಠ
ಕತ್ತಲೆ ಬೆಳಕು
ಎಲ್ಲಕ್ಕೂ ಅಲ್ಲೊಂದೆ ಹೆಸರು
ಕಾಡು
ಆ ಕಾಡಿಗೆ ಎಲ್ಲವೂ ತಾನೇ
ಕಾಡಿನೊಡಲಲಿ ಬೆಳೆದ ಆದಿವಾಸಿಗೆ
ಆದಿವಾಸಿಯೊಡಲಲಿ ಬೆಳೆದ ಕಾಡಿಗೆ
ಹೆದರಿದ ನೀನು ಹೆಸರಿಟ್ಟಿರುವೆ
ಜೋಡಾನ್ ಘಾಟಿನಲಿ ಬಾಬೇಝರಿಯಲಿ
ಪಿಪ್ಪಲ್ಸ್ ಧರಿಯಲಿ ಇಂದ್ರಪಲ್ಲಿಯಲಿ
ಸಾತ್ನಾದಲ್ಲೂ
ಅವರು ಕಷ್ಟದಿ ಬರೆದ ಬದುಕನು
ಅವರು ಬೆವರಿಂದ ಕಟ್ಟಿದ ಬದುಕನು
ಹೆದರಿ ಉರುಳಿಸಿ
ಸನ್ನಿಯಿಂದ ಗುಂಡುಗಳಿಂದ
ರಕ್ತ ಗಂಧಕಧೂಮವ ಸೇರಿಸಿ
ನೆಲ ಅಗೆವ ಗುದ್ದಲಿಗಳಲಿ ಅವರಿಗೆ
ಹುಟ್ಟು ಹಬ್ಬ ಮಾಡಿದ್ದು ನೀನು
ಏನೇ ಮಾಡಿದರೊ, ನೀನವರನ್ನು
ಮತ್ತು ಕೊಲ್ಲುವುದು ಶಕ್ಯವಿಲ್ಲ
೩
ಇವರು ಹುಟ್ಟು ಹಾಕಿದ ಚರಿತ್ರೆಯಿಂದಲೇ
ವೀರರು ಹುಟ್ಟಿದ್ದು
ಆದಿವಾಸಿ ಹುಟ್ಟಿದ ದಿನ
ಯಾವುದೆಂದು ಹೇಗೆ ನೆನಪಿಟ್ಟುಕೊಳ್ಳುವುದು
ಏಪ್ರಿಲ್ ಇಪ್ಪತ್ತೆಂದು ವರ್ತಮಾನದ ಚರಿತ್ರೆಗೋಸ್ಕರ
ಪ್ರತಿವರ್ಷ ನೆನಪು ಮಾಡುವೆ
ಚರಿತ್ರೆಯ ವೇಗಕ್ಕೆ ನಡುಗಿ ಈ ಬಾರಿ
ಮಾರ್ಚಿ ಹತ್ತೊಂಬತ್ತಕ್ಕೇ
ದೇವಕಿ ಚರಸಾಲೆಗೆ ಓಡಿದೆ
೪
ಈಗಿಲ್ಲಿ ಬೆಟ್ಟದ ತುದಿಯ ಮೇಲಿಂದ
ಆ ಕಾಡ ಹೂಗಳ ಗಾಳಿ ಸುಳಿಯಾಗಿ ಬೀಸುತಿದೆ
ಆಕಾಶವೂ ಯಾಕೋ ಮಣ್ಣಲಿ
ಕಾಡೆಲ್ಲಾ ಕಣ್ಣು ಮಾಡಿ ಹುಡುಕಾಡುತಿದೆ
ನೋಡಲಾಗದ ಗೋದಾವರಿ ಇದ್ದಲ್ಲೇ ಸೊರಗಿ ದುಃಖಿಸಿದೆ
೫
ಮೊನ್ನೆಯ ಜನ ನಿನ್ನೆ ಇರದಿರಬಹುದು
ನಿನ್ನೆಯ ಸ್ಮಾರಕ ಇಂದೂ ಇರದಿರಬಹುದು
ಮೊನ್ನೆ ನಿನ್ನೆ ಇಂದಿಗೂ ಇಂದ್ರಪಲ್ಲಿ ಇರುವುದು
ಇಂದ್ರಪಲ್ಲಿ ಮೊನ್ನೆಯ ಜನರದ್ದಾಗದಿರಬಹುದು
ನಿನ್ನೆಯ ಸ್ಮಾರಕದ್ದೂ ಆಗದಿರಬಹುದು
ಇಂದು ಒಡೆದವರ ಕೈಯಲ್ಲೇ ಅದು ಎಂದೆಂದಿಗೂ ಇರದು
ಆದಿವಾಸಿಗಳ ರಕ್ತಮಾಂಸಗಳೊಂದಿಗೆ ಬೆಳೆದ
ಕಾಡಿರುವುದು
ಆದಿವಾಸಿಗಳ ರಕ್ತಮಾಂಸಗಳು ಕರಗಿದ
ನೆಲವಿರುವುದು
ಅಮರರಾದವರ ರಕ್ತ ವಾರಸುದಾರರೂ ಇರುವರು
ಜೀವಧಾರೆ ಗಂಗೆಯಿರುವಳು
ಜೀವನಾಧಾರ ಕತ್ತಿಯಿರುವುದು, ಲಾಠಿಯಿರುವುದು
ಕಾಡಿಡೀ ಕೂಂಬಿಂಗ್ ಮಾಡಿದರೂ
ಕಾಡಲ್ಲೇ ಅವಿತ ಬೆಂಕಿಯಿರುವುದು
ಮೊನ್ನೆ ಕೇವಲ ಊರಾಗಿದ್ದ ಇಂದ್ರಪಲ್ಲಿ
ಕ್ರಾಂತಿಯ ಮೈಲುಗಲ್ಲಾಗಿ ಉಳಿವುದು
ನಿನ್ನೆಯ ನೆನಪಿನ ಸಂಕೇತ ಇಂದ್ರಪಲ್ಲಿ ಸ್ಮಾರಕ
ಒಡೆದವರೆದೆಯ ಮೇಲಣ ಗುಡಿಬಂಡೆಯಾಗುವುದು
ಕ್ರಾಂತಿಕಾರಿಗಳ ನೋಟದ ಶಿಖರವಾಗಿ ತಲೆಯೆತ್ತುವುದು
[ಮಾರ್ಚ್ ೧೯ರಂದು ಇಂದ್ರಪಲ್ಲಿ ಸ್ಮಾರಕವನ್ನು ಪೂರ್ಣ ಕೆಡವಿದರು - ವಾರ್ತೆ]
1 comment:
ಕ್ರಾಂತಿಯ ಆರಂಭ ನೂರಾರು ವರ್ಷಗಳಿಂದ ಮಡುಗಟ್ಟಿದ ನೋವು. ತುಂಬಾ ಚೆನ್ನಾಗಿದೆ.
Post a Comment