Wednesday, October 18, 2006

ಎಲ್ಲಿ?

ಅಸದುಲ್ಲಾ ಖಾನ್ ಘಾಲಿಬ್
[ಉರ್ದು]

ನನ್ನಾಶಯಗಳೆಲ್ಲಾ ಮಣ್ಣಾಗಿದೆ
ದಾರಿ ಕಾಣದ ಕಣ್ಣಾಗಿದೆ

ಸಾವು ಬರಬೇಕಾದಾಗ ತಾನೇ ಬರುವುದು
ಆದರೆ ನಿದ್ದೆ ಯಾಕೆ ಬರದಿರುವುದು?

ನನ್ನ ನೋಡಿ ನಾನೇ ನಗುತ್ತಿದ್ದೆ
ಈಗ ನಗುವೂ ಇಲ್ಲ, ಇಲ್ಲ ನಿದ್ದೆ

ಭಕ್ತಿ-ಭಜನೆ ಒಳ್ಳೆಯದೇ, ಗೊತ್ತು
ಆದರೆ ಅದಕ್ಕೂ ಇಲ್ಲ ಉತ್ಸಾಹ, ಈ ಹೊತ್ತು

ಎಲ್ಲಕ್ಕೂ ನನ್ನಿಂದ ಬರೇ ಮೌನ
ಇಲ್ಲವೇ, ಮಾತೇ ಬರುವುದಿಲ್ಲವೇನ?

ನನ್ನ ಹೃದಯದ ಗಾಯ ಕಾಣದಿದ್ದರೇನು?
ಬೆಂದ ಹೃದಯದ ವಾಸನೆ ಬರಲಿಲ್ಲವೇನು?

ನನ್ನ ಬಗ್ಗೆ ನನಗೇ ತಿಳಿಯದ ಹಾಗೆ,
ನೋಡಿಸ್ವಾಮಿ ನಾನಿರೋದೇ ಹೀಗೆ

Tuesday, October 17, 2006

ಮೈಕೆಲೇಂಜೆಲೋ

ಕಾಜಿಮೀರ್ಜ್ ವೀರ್‍ಜಿನ್‍ಸ್ಕಿ
[ಪೋಲಿಷ್, ಅನುವಾದ:ತೇಜಸ್ವಿನಿ ನಿರಂಜನ, ಜಿಡಿಸ್‍ಲಾ ರೆಷೆಲ್ಯೂಸ್ಕಿ]

ಯೂರೋಪು ಖಂಡದ ಆತ್ಮವೇ ನಡುಗಿದ ಕಾಲವದು
ಮೈಕೆಲೇಂಜೆಲೋ
ಗೋಲದ ಕೆಳಗೆ
ರೋಮಿನಲ್ಲಿ
ದೇವರ ಹತ್ತಿರ
ಗಾರೆಯವನ ತೊಟ್ಟಿಲಲ್ಲಿ ತೂಗುತ್ತ
ಆರಾಧನಾ ಮಂದಿರ, ಛತ್ತು, ಗೋಡೆಗಳ ಮೇಲೆ
ಚಿತ್ರ ಬಿಡಿಸಿದ

ಕೆಳಗೆ ಬಗ್ಗಿ
ಆತ ನೋಡಿದ
ಜಗಳಾಡುವ ಜನರನ್ನು
ಘೋರ ಯುದ್ಧಗಳನ್ನು:
ಮೇಲಿನಿಂದ ಗಟ್ಟಿಯಾಗಿ ಹೇಳಿದ:
"ಶಾಂತಿ! ಶಾಂತಿ!
ಇಲ್ದಿದ್ರೆ ನನ್ನ ಕುಂಚವನ್ನು ಕೆಳಕ್ಕೆಸೆದು
'ಜಗತ್ತಿನ ಸೃಷ್ಟಿ'ಯನ್ನು ನಿಲ್ಲಿಸೇನು!"

Sunday, October 15, 2006

ಕಾಶೀಗ್ ಹೋದ ನಂ ಬಾವ

ಕೈಲಾಸಂ
[ಕನ್ನಡ]

ಕಾಶೀಗ್ ಹೋದ ನಂ ಬಾವ
ಕಬ್ಣದ್ ದೋಣೀಲಿ
ರಾಶೀ ರಾಶೀ ಗಂಗೆ ತರೋಕ್
ಸೊಳ್ಳೇ ಪರದೇಲಿ

ತಂಗಿ ಯಮುನಾದೇವಿಯವಳ
ಸಂಗವಾಯ್ತೆಂದುಬ್ಬಿ ಉಬ್ಬಿ
ಗಂಗಾದೇವಿ ಉಕ್ಕಿ ಉಕ್ಕಿ
ಬೀಸಿ ಬೀಸಿ ದೋಣಿ ಕುಕ್ಕಿ
ಬಾವ ಅತ್ತು ಬಿಕ್ಕಿ ಬಿಕ್ಕಿ
ಬಂಡೆತಾಕಿ ದೋಣಿ ಒಡ್ದು
ಸೊಳ್ಳೆ ಪರದೆ ಬಾವನ್ ಬಡ್ದು
ಮಂಡೆ ದವಡೆ ಪಟ್ಟಾಗೊಡ್ದು
ಕಾಶೀ ಆಸೆ ನಾಶವಾಗಿ
ಮೀಸೇ ಉಳಿದದ್ ಎಷ್ಟೋ ವಾಸೀಂತ್
ಕಾಶೀಂದ್ ಬಂದಾ ನಂ ಬಾವ

Monday, October 09, 2006

ನನ್ನ ಪುಟ್ಟ ಮಗ ನನ್ನನ್ನು ಕೇಳುತ್ತಾನೆ

ಬರ್ಟೋಲ್ಟ್ ಬ್ರೆಕ್ಟ್
[ಜರ್ಮನ್]

ನನ್ನ ಪುಟ್ಟಮಗ ನನ್ನನ್ನು ಕೇಳುತ್ತಾನೆ - ಲೆಕ್ಕ ಕಲಿಯಲೇಬೇಕಾ?
ಹೌದು ಕಲಿತೇನು ಪ್ರಯೋಜನ ಅಂತ ಹೇಳಬೇಕು - ಎರಡು ಚೂರು
ರೊಟ್ಟಿ, ಒಂದಕ್ಕಿಂತ ಹೆಚ್ಚೆಂದು ಕಲಿಯುವಿದಕ್ಕಿಂತ ಮಿಗಿಲೇನಿದೆ?
ನನ್ನ ಪುಟ್ಟ ಮಗ ನನ್ನನ್ನು ಕೇಳುತ್ತಾನೆ - ಫ್ರೆಂಚ್ ಭಾಷೆ ಕಲಿಯಬೇಕಾ?
ಹೌದು ಕಲಿತೇನು ಪ್ರಯೋಜನ ಅಂತ ಹೇಳಬೇಕು - ಆ ರಾಷ್ಟ್ರ ಕುಸಿಯುತ್ತಿದೆ
ನಿನ್ನ ಹೊಟ್ಟೆಯನ್ನು ಕೈಯಿಂದ ಉಜ್ಜಿ ನಿಟ್ಟುಸಿರಿಟ್ಟರೆ
ಯಾವ ತೊಂದರೆಯೂ ಇಲ್ಲದೇ ನಿನಗಿದೆಲ್ಲ ಅರ್ಥವಾಗುತ್ತದೆ.
ನನ್ನ ಪುಟ್ಟ ಮಗ ನನ್ನನ್ನು ಕೇಳುತ್ತಾನೆ - ಚರಿತ್ರೆ ಕಲಿಯಬೇಕಾ?
ಹೌದು ಕಲಿತೇನು ಪ್ರಯೋಜನ ಅಂತ ಹೇಳಬೇಕು - ನಿನ್ನ ತಲೆಯನ್ನು
ಭೂಗರ್ಭದಲ್ಲಿ ಹುದುಗಿಟ್ಟರೆ ಬದುಕುವುದನ್ನ ಕಲಿಯುವೆ ಅಂತ.
ಹೌದು ಲೆಕ್ಕ ಕಲಿ ಅಂತ ನಾನವನಿಗೆ ಹೇಳುತ್ತೇನೆ,
ಜೊತೆಗೆ ಫ್ರೆಂಚ್ ಮತ್ತು ಚರಿತ್ರೆ!

Sunday, October 08, 2006

ಚಂದ್ರನೊಂದಿಗೆ ಏಕಾಂತ ಕುಡಿತ

ಲಿ ಬಾಯ್
[ಮೂಲ: ಚೀನೀ. ಇಂಗ್ಲೀಷ್ ಅನುವಾದ: ವಿಕ್ರಂ ಸೇಠ್]


ಹೂಗಳ ನಡುವೆ ಮದಿರೆಯ ಕುಡಿಕೆ
ಸ್ನೇಹಿತರಿಲ್ಲದೆ ಒಬ್ಬನೆ ಕುಳಿತು,
ಲೋಟವನೆತ್ತಿ ಚಂದ್ರನ ಕರೆವೆ,
ನಾನು, ನೆರಳು, ಚಂದ್ರ, ಮೂವರ ಗುಂಪು.


ಕುಡಿಯಲು ಮಾತ್ರ ಚಂದ್ರಗೆ ಬರದು
ನೆರಳು ಮಾಡುವುದು ನನ್ನದೆ ನಕಲು
ಇಬ್ಬರ ಜೊತೆಗೂ ಖುಷಿಯನು ಪಡೆಯುತ
ಕಾಯುತಲಿರಲು ಬರುವ ವಸಂತ

ನಾ ಹಾಡುವೆ, ತೂರಾಡುವ ಚಂದ್ರ.
ನಾ ಕುಣಿವೆ - ಕುಣಿದಾಡಿತು ನೆರಳು
ಎಚ್ಚರದಲಿ ಖುಷಿಯನು ಹಂಚಿ
ತೂರಾಡುತ ಬೇರ್ಪಟ್ಟರೆ ಸುತ್ತಲು ಇರುಳು.

ತೊಡುವ ಪಣ:
ಮಾನವ ಸಂಬಂಧಗಳ ಮೀರಿ ಗೆಳೆಯರಾಗಿರಲು
ಬೆಳ್ಳಿನದಿ ಮುಗಿವಲ್ಲಿ ಮತ್ತೆ ಮತ್ತೆ ಸೇರಲು

Thursday, October 05, 2006

ಮೈ ಕೈ ಎಲ್ಲ....

ವೈ ಎನ್ ಕೆ
[ಕನ್ನಡ]

ಮೈಕೇಲ್ ಜಾಕ್‌ಸಾನ
ಎಂಥ ಹಾಡು ಹಾಡತಾನ?
ಎಂಥ ಜಾದೂ ಮಾಡತಾನ!
ಮೈ ಕೈ ಎಲ್ಲ ಜಾಡಿಸೋಣ
ಮೈ ಕೈ ಎಲ್ಲ ತಾಕಿಸೋಣ

ಹೆಣ್ಣೋ? ಗಂಡೋ? ಸಂಶಯ
ಬರಿಸುವಂಥ ದಿರಸಯ್ಯ
'ಅರಸಿ' ಯೇ 'ಅರಸ'ಯ್ಯ --
The Queen is the King
Jackson will swing

'ಥ್ರಿಲ್ಲರ್' ಕ್ಯಾಸೆಟ್ ಕೇಳಬೇಕು
ಥ್ರಿಲ್ಲರ್ ವಿಡಿಯೋ ನೋಡಬೇಕು
ಜಾಕ್‌ಸನ್‌ ಹಾಡಬೇಕು
ಹಾಡೊದನ್ನ ನೋಡಬೇಕು

ಮೈ ಕೈ ಎಲ್ಲ ತಾಕಿಸೋಣ
ಮೈ ಕೈ ಎಲ್ಲ ಚಾಕಿಸೋಣ
ಮೈಕೇಲ್ ಜಾಕ್‌ಸಾನ

Tuesday, October 03, 2006

ಅಬೀಡ್ಸಿನಲ್ಲಿ ರಸ್ತೆ ದಾಟುವುದು

ಕೆ.ವಿ.ತಿರುಮಲೇಶ್
[ಕನ್ನಡ]

ನಿಮಗೀಗ ಬುಲ್‍ಚಂದನ ವಸ್ತ್ರದ ಮಳಿಗೆಗೆ ಹೋಗಬೇಕಲ್ಲವೇ?
ವೈವಿಧ್ಯವನ್ನು ಅರಸುವ ನೀವು ಸರಿಯಾದ ಅಂಗಡಿಯನ್ನೇ
ಆರಿಸಿದಿರಿ. ಈಗ ನಾವು ಈ ರಸ್ತೆಯನ್ನು ದಾಟಬೇಕಾಗಿದೆ.
ತುಸು ತಾಳಿರಿ. ಸಂಜೆ ಯಾವಾಗಲೂ ಇಲ್ಲಿ ಜನಸಂದಣಿ ಜಾಸ್ತಿ.
ಎಡಗಡೆಯಿಂದ ಸಾಲುಗಟ್ಟಿ ಬರುತ್ತಿರುವ ಈ ಮೋಟಾರು
ವಾಹನಗಳು ಹೋಗಿಕೊಳ್ಳಲಿ. ಬಲಗಡೆಯಿಂದಲೂ ಬರುತ್ತಿವೆ.
ಅಬೀಡ್ಸಿನಲ್ಲಿ ರಸ್ತೆ ದಾಟುವುದೆಂದರೆ ಪ್ರಾಣವನ್ನು
ಜೇಬಿನಲ್ಲಿರಿಸಿ ಹಾಕಿಕೊಂಡಿರಬೇಕು. ನೋಡಿದಿರ,
ಆ ಡಬಲ್ ಡೆಕ್ಕರಿನ ಕಿಟಕಿಗಳು ಬುಲ್‍ಚಂದನ ಬೆಳಕುಗಳನ್ನು
ಹೇಗೆ ತುಂಡರಿಸಿ ಹೋದವು! ಆದರೆ ಅವು ಮತ್ತೆ
ಜಗಜಗಿಸುತ್ತಿವೆ. ಬುಲ್‍ಚಂದನ ಬೆಳಕುಗಳೇ ಹಾಗೆ.

ಈಗ ನುಗ್ಗಿಬಿಡಿ. ಈ ಕಾರು ಮತ್ತು ಆ ಸ್ಕೂಟರಿನ ನಡುವೆ
ರಸ್ತೆ ದಾಟಿಬಿಡುವ. ಕೇಳಿಯೂ ಕೇಳಿಸದಂತೆ ಇದ್ದ ಸದ್ದು
ಸ್ಕೂಟರಿನವನು ಬಯ್ದದ್ದು. ಪೋಲೀಸನ ಬಿಗಲಿನಂತೆ ಕಿರುಚಿದ್ದು
ಕಾರಿನ ಬ್ರೇಕು. ಅಂತೂ ದಾಟಿದ ಮೇಲೆ ಹೇಗನ್ನಿಸುತ್ತಿದೆ
ನಿಮಗೆ? ನಿರಂತರವಾದ ಈ ರಸ್ತೆಯನ್ನು ತುಂಡರಿಸಿಬಿಟ್ಟೆವು
ಎಂದೆ? ಆದರೆ ಎಷ್ಟು ಬೇಗ ಅದು ಮತ್ತೆ
ಒಂದಾಯಿತು ನೋಡಿ... ನಾವು ದಾಟಿಬಂದದ್ದೇ ಇಲ್ಲ
ಎಂಬಂತೆ. ಅಬೀಡ್ಸಿನ ರಸ್ತೆಗಳೇ ಹಾಗೆ.

Monday, October 02, 2006

ಕಣ್ ಕಂಡುಕೊಂಡದ್ದು

ಚಂದ್ರಸೇನ್
[ತೆಲುಗು]

ಕಣ್ಣು ತೆರೆದರೆ ಜನನ
ಮುಚ್ಚಿದರೆ ಮರಣ
ಮಿಟುಕಿಸಿದಷ್ಟೇ ಅಲ್ಲವೇ ಪಯಣ?

Sunday, October 01, 2006

ತುಂತುರುಗಳು

ಎಚ್.ಎಸ್.ಬಿಳಿಗಿರಿ
[ಕನ್ನಡ]

ಪೋಪೋಪಡೆ ಹಿಟ್ಲರ ಪಡೆ
ಹಾಕಿದರೂ ಮಟ್ಟ
ಧೃತಿಗೆಡದಲೆ ಹೊಗೆಯುಗುಳುವ
ಚರ್ಚಿಲ್ಲನ ಚುಟ್ಟ;
ಜಡಿದರು ಮಳೆ, ಪೊತ್ತರು ಇಳೆ
ಉರಿಬಿಸಿಲಿನ ಕಾಟ
ವಿರಮಿಸುತಲಿ ಮಲಗುವ ಸೋ-
ಮಾರಿಯ ಸಿಗರೇಟ;

ಜ್ಞಾಪಿಸುವೊಲು ನಿಂತಿವೆ ಭ-
ದ್ರಾವತಿಯೊಳು, ರಮಣಿ
ಗಗವವನೆ ತಿವಿಯುವವೊಲು
ಹೊಗೆಯುಗುಳುವ ಚಿಮಣಿ!

****

ಬಿಸಿನೀರ ಕಾವಿನಿಂ-
ದವಳ ಮೊಗ ಕೆಂಪೇರಿ-
ದುದ ಕಂಡು ನನ್ನ ಮನ ಕುದಿಯಿತಲ್ಲ!
ಬಿಸಿನೀರೆ! ನೀ ಧನ್ಯ!
ಅವಳ ಮೊಗವನು ನೀನು
ಮುತ್ತಿಟ್ಟು ಕೆಂಪೇರಿಸಿರುವೆಯಲ್ಲ!

***

ಭೂತವಾದರು ಸರಿಯೆ ಮನುಜಗೆ
ಹೆದರಿ ನಿಲ್ಲದು ಅರೆಚಣ.
ಎಷ್ಟು ಧೈರ್ಯವೊ ಮೂಗ ಮೇಲೆಯೇ
ಬಂದು ಕೂರ್ವುದು ಈ ನೊಣ!

***

ಕರಿಯ ಹುಡುಗಿಯು ನಗಲು ಕಾಣುವ
ಬಿಳಿಯ ಹಲ್ಲಿನ ಮಿಂಚೊಲು
ಬೆಂಗಳೂರಿನ ಟಾರ ರೋಡೊಳು
ಬೆಣಚುಕಲ್ಲಿನ ಗೊಂಚಲು!

***

ಮರಗಳೆಲೆಯ ನಡುವೆ ಕಾಂಬ
ತುಂಬುವೆರೆಯ ಚೆಲುವಿಗೆ
ಸಾಟಿಯೇನು ಬರಿಯ ಕಣ್ಗೆ
ತೋರ್ವ ಚಂದ್ರಮಂಡಲ?

ಒಡಲು ಕಂಡು ಕಾಣದಂಥ
ಅರ್ಧ ನಗ್ನ ಸುಂದರಿ
ಮನ ಸೆಳೆವೊಲು ಸೆಳೆವಳೇನು
ಪೂರ್ಣನಗ್ನ ರಮಣಿಯು!