Wednesday, February 28, 2007

ಬಜೆಟ್ಟು

ಎಚ್. ಡುಂಡಿರಾಜ್

[ಕನ್ನಡ]

ವಿತ್ತ ಸಚಿವರ
ಒಂದು ಕರದಲ್ಲಿ
ಬಡವನ ಜುಟ್ಟು,
ಇನ್ನೊಂದು ಕರದಲ್ಲಿ
ಕತ್ತರಿ ಕೊಟ್ಟು
ಬಿಟ್ಟರಾಯಿತು ಅದೇ
ವಾರ್ಷಿಕ
ಬಜೆಟ್ಟು

Wednesday, February 21, 2007

ಮೈಸೂರಿನಲ್ಲಿ ದಸರೆ

ಗೋಪಾಲಕೃಷ್ಣ ಅಡಿಗ



[ಕನ್ನಡ]

ಮೈಸೂರು ಮೊದಲಿನಂತಿದೆಯೆ? ಇದೆ - ಅದೇ
ಬಾನು: ಮೋಡದ ಪರದೆ ಸರಿಸಿ ಚುಚ್ಚಿ ಮುಚ್ಚಿ ತಂಪೆರೆದು ಕಣ್ಣೀರು
ಮಳೆಗರೆವ ನೀಲಿ ಕಮಾನು, ಸೂರು, ಚಾಮುಂಡಿ ಬೆಟ್ಟವೂ
ಇದೆ - ಮೆಟ್ಟಿಲು ಮೆಟ್ಟಿಲನ್ನೆಣಿಸಿ ಹತ್ತಿ ಹತ್ತಿ ಏದುಸಿರು ಬಿಡುತ್ತ
ತಾಯಿಯ ಪಾದ ಮುಟ್ಟಬೇಕಾಗಿಲ್ಲ. ಬಸ್ಸು ಕಾರುಗಳು ಮೇಲಕ್ಕೆತ್ತಿ
ಕುಕ್ಕುವುವು ಮಹಿಷಾಸುರನ ಪಾದಪಂಕಕ್ಕೆ
ಮಿಕ್ಕೆಲ್ಲವಕ್ಕೀಗ ಚಹರೆಯೇ ಬೇರೆ,
ಮೈಸೂರಿಗೆ ಈತ ಬೇರೆ ಮೋರೆ.
ಮೈಸೂರು ಮೊದಲಿನಂತಿಲ್ಲೀಗ; ಜರಿಪೇಟ,
ಲಾಂಕೋಟು, ಇಜಾರು, ಕಮ್ಮರು ಬಂಧ
ಬಿಗಿದುಕೊಂಡಿದ್ದ ಮೈಸೂರೀಗ ವಸ್ತ್ರಾಪಹರಣ
ಬದಲಾವಣೆಯ ಮುಗಿಸಿ ನಿಂತಿದೆ. ಶರ್ಟು ಪ್ಯಾಂಟುಗಳಲ್ಲಿ
ಸಡಿಲುಗೊಂಡಿದೆ ಬಿಗಿದ ತಂತಿ, ಸಯ್ಯಾಜಿರಾವ್ ರಸ್ತೆ
ದೊಡ್ಡ ಪೇಟೆಗಳಲ್ಲಿ ಅಪಸ್ವರದ ವ್ಯಭಿಚಾರಿ ಭಾವ ಸಂಚಾರ,
ಸ್ಥಾಯಿ ಎಂಬುದೇ ಇಲ್ಲಿಲ್ಲ. ತೊಣಚಿಕೊಪ್ಪಲ ವರೆಗು
ಹಿಗ್ಗಲಿಸಿ ಚಾಚಿಕೊಂಡಿದೆ ಮೈಯ.
ದೊಡ್ಡಕೆರೆ ಇಲ್ಲ. ಕಾರಂಜಿ ಕೆರೆಯೂ ಮಾಯ.
ಹೆಜ್ಜೆ ಹೆಜ್ಜೆಗೂ ತಂಪಿನುಪಶಮನ ನೀಡುತ್ತಿದ್ದ
ಥಂಡೀ ಸಡಕ್ಕಿಗೂ ಅಪಾಯ ಕಾದಿದೆ. ಸಂಜೆ
ವಿಹಾರಕ್ಕೆ ಕರೆದು ಕನಸಿನುದ್ಯಾನವನಗಳ ಕಲಕಿಸಿ ನಕ್ಷತ್ರಗಳ
ಹೊಟ್ಟೆಯೊಳಗಿಟ್ಟು ಕುಲುಕುತ್ತಿದ್ದ ಕುಕ್ಕರಹಳ್ಳಿ
ಕೆರೆಯಲ್ಲಿ ಕನ್ನಡಿಯಿಲ್ಲ - ರಾಕ್ಷಸಾಕೃತಿಯ ಸರ್ವಗ್ರಾಸಿ
ಜಿಗಣೆಕಳೆಗಳ ಕೆಟ್ಟ ಕನಸಿನ ಕರಾಮತ್ತು.

ಪರಂಪರೆಗೆ ಕತ್ತರಿ ಬಿದ್ದು ಚಿಂದಿ ಚಿಂದಿ ಬಿದ್ದಿದೆ ಇಲ್ಲಿ
ಸ್ಥಿರತಾರತಮ್ಯಗಳ ವಿವೇಕದ ಪುರಾಣ ಕರಾರು;
ಹೊಸ ಕರಾರಿಗೆ ಮುಕ್ತ ಹೃದಯಗಳ ಸ್ವಹಸ್ತ ಸಹಿ
ಬಿದ್ದಿಲ್ಲ. ಬರೀ ತಕರಾರು
ಮನೆಯಲ್ಲಿ, ರಸ್ತಗಳಲ್ಲಿ, ಶಾಲೆ ಕಾಲೇಜುಗಳಲ್ಲಿ, ಜನಸಭೆಯಲ್ಲಿ.
ಲಂಗುಲಗಾಮಿಲ್ಲದ ಲಫಂಗತನಕ್ಕೇ ಈಗ
ರಹದಾರಿ. ದಿಕ್ಕುಗೆಟ್ಟು ಸಜ್ಜನಿಕೆ ತಳ
ಕಿತ್ತು ಓಡುತ್ತಲಿದೆ ಹರದಾರಿ ದೂರ ದಿಕ್ಕಾಪಾಲು.



ಪ್ರಜಾತಂತ್ರದಲ್ಲೀಗ ಜನತೆಯ ದಸರೆ. ಹೊಸ ತಾರ
ತಮ್ಯ ಸೌಧಕ್ಕೆ ಬಿದ್ದಿಲ್ಲ ಇನ್ನೂ ಅಸ್ತಿಭಾರ. ಸಿಕ್ಕಾಪಟ್ಟೆ
ಸಿಕ್ಕುಸಿಕ್ಕುಗಳಲ್ಲಿ ಸಿಕ್ಕಿಕೊಂಡಿರುವ ಪುರುಷಾರ್ಥಸಂಕರದಲ್ಲಿ
ಪಶುಬಲದ ಜಗ್ಗಾಟ, ನುಗ್ಗಾಟ, ವಿಜಯೋತ್ಸಾಹ.
ಮನುಷ್ಯ ಮುಖವಾಡ ತೊಟ್ಟ ಮಹಿಷಾಸುರರೆ
ಹೆಜ್ಜೆಹೆಜ್ಜೆಗೆ. ಹೆಣ್ಣು ಹೊನ್ನು ಮಣ್ಣಿಗೆ ವೃಥಾ
ಬಾಯ್ಬಾಯ್ಬಿಡುವ ಪುಂಡ ದಂಡು. ಜೊಲ್ಲು ಸುರಿಸುತ್ತಿರುವ ಶುನಕ
ಹುಡುಕುತ್ತಲೇ ಇದೆ ಬೀದಿಯುದ್ದಕ್ಕು ತಿಂಡಿಯ ತುಣುಕ;
ನೆಗೆದಾಡುತ್ತಲಿದೆ ಹುಚ್ಚೆದ್ದು ಗಲ್ಲಿಗಲ್ಲಿಯಲ್ಲಿ ಮಣಕ.
ಎಂಜಲೆಲೆಗಾಗಿ ಹೋರಾಡುತ್ತಲಿವೆ ನೋಡಿ ಹೋರಿ, ತಿರುಕ.

ಕನ್ನಂಬಾಡಿಯಲ್ಲಿ ಬರೀ ನೀರಲ್ಲ; ಬೆಳಕಲ್ಲ; ಸಂಗೀರ
ಧಾರೆ ಮುಲುಕುವ ಚಿಲುಮೆ;
ದೊಡ್ಡಕೆರೆಯಲ್ಲಿ ವಸ್ತು ವಸ್ತ್ರ ವೇಷಾಂತರ ಪ್ರದರ್ಶನದ
ನರವಾನರರ ಚೇಷ್ಟೆ. ಗಮ್ಮತ್ತು, ಹೋಟಲುಗಳಲ್ಲಿ
ಸಿನೆಮಾ ಮಂದಿರಗಳಲ್ಲಿ, ಬಾರುಗಳಲ್ಲಿ ಮನಸ್ಸೇ ಸತ್ತ
ಮಾನವಾಭಾಸಗಳ ಅಟ್ಟಹಾಸದೆ ಕೇಕೆ, ಚೀರು, ಕೋಲಾಹಲ.
ಅರಮನೆಗೆ
ವಿದ್ಯುದ್ದೀಪದತ್ಯುಗ್ರ ಅಲಂಕಾರಗಳ ಭಾರ ವಿಕಾರ.
ರಾಜರಿಲ್ಲ, ದರಬಾರಿಲ್ಲ;
ಮುಜರೆ, ನಜರುಕಾಣಿಕೆಗಳಿಲ್ಲ;
ಸಂಗೀತ ಗೋಷ್ಠಿಗಳಿಲ್ಲ. ಅಪಸ್ವರಕ್ಕೇ ಪಟ್ಟ
ಕಟ್ಟಿದಸ್ತವ್ಯಸ್ತ ಅಧಿಕಾರದ ವಿಕಾರ.
ಮನವೆ ಖೋತಾ ಆದ ಮಂದಿ ಮಂದಿ ಮಂದೆಯ ಮುಂದೆ
ಸ್ಥಿರಚಿತ್ರ, ವೇಷಾಂತರ, ಆನೆಕುದುರೆಗಳ, ಒಂಟೆಗಳ, ಸಿಪಾಯಿಗಳ
ತುಕಡಿತುಕಡಿಗಳ ಭೂತಕಾಲದ ಪ್ರೇತ, ಪ್ರೇತ,
ಜಂಬೂಸವಾರಿ.



ಮೈಸೂರಿನೊಳಗೆ ಏತಕ್ಕೇನು ಕಡಿಮೆ?
ಮೇಲಕ್ಕೆ ಕೆಳಕ್ಕೆ ಜಗ್ಗುವುದು ಮಾನಸಯಂತ್ರ;
ಕಾಲೇ ಕಂಭ, ದಪ್ಪ ದಪ್ಪ ತೊಗಲಿನ ಡೇರೆ
ವಾತಾಯನಗಳಿವೆ, ನವದ್ವಾರ ಬಂಧ,
ತಲೆಬುರುಡೆಯೊಳಗೊ ಸುಯೋಜಿತ ಸೂಕ್ಷ್ಮ ಸೂಕ್ಷ್ಮ ತಂತು ತಂತು
ಮಿಂಚಿನ ಗೂಡು; ಗರ್ಭಗುಡಿಯಲ್ಲಿ ಬರಿ
ಜಿರಳೆ, ಜೇಡ, ಚೇಳು ಹಾವುಗಳ ಹಿಂಡು,
ಶೂನ್ಯವಾಗಿದೆ ಒರಲೆ ಹತ್ತಿರುವ ಮಂದಾಸನ,
ನಂದಿ ಹೋಗಿರುವ ನಂದಾದೀಪ. ನಿರ್ಮಾಲ್ಯಗಳ ಗಬ್ಬು ನಾತ;
ಶೂನ್ಯ ಸಿಂಹಾಸನವ ಏರುವಾತನು ಯಾರು?
ಆರು ವೈರಿಗಳೊಳಗೆ ಭಾರಿ ತಕರಾರು,
ಬರಸುತ್ತಲಿದ್ದಾರೆ ಹೊಸ ಕರಾರು.
ಸೂರ್ಯಮಂಡಳದಿಂದ, ನೀಹಾರಿಕೆಗಳಾಚೆ ಕಡೆಯಿಂದ
ಕ್ಷೀರ ಸಾಗರದ ಕಿರುದೆರೆಗಳುರುಳಿಂದ,
ಹೃದಯಾಂತರಾಳದ ಅಂತಸ್ಫೂರ್ತಿ ಕಿಡಿಯಿಂದ
ಬರಬಹುದು, ಬರುವನೇ ವಿವೇಕಭೂಪಾಲ?
ಆಗಲೇ ಮೈಸೂರು ಸರ್ವಥಾ ಸ್ವಸ್ಥ;
ಹೊಸತಾರತಮ್ಯಕ್ಕೆ ಪ್ರಾಣಪ್ರತಿಷ್ಠೆ;
ಮಾನವತ್ವಕ್ಕೆ ತೋರುವುದು ಹೊಸ ಬಟ್ಟೆ
ಆಗ ಮಾತ್ರವೆ ಸಾರ್ಥಕ ನವ ವಿಜಯದಶಮಿ -
ಇಲ್ಲವಾದರೆ ನಮ್ಮ ಮೈಸೂರು ದಸರೆ
ವ್ಯರ್ಥ ಹಳವಂಡಕ್ಕೆ ಇನ್ನೊಂದು ಹೆಸರೇ

೧೯೮೩

Friday, February 09, 2007

ಪದ

ಟೋನಿ ಹೋಗ್ಲಂಡ್
[ಇಂಗ್ಲೀಷ್]

ಈ ದಿನ ಮಾಡಬೇಕಾದ
ಕೆಲಸಗಳ ಕಾಟುಹಾಕಿದ
ಯಾದಿಯಂತ್ಯದಲ್ಲಿ

ಹಸಿರು ದಾರ ಮತ್ತು
ಹೂಕೋಸುಗಳ ನಡುವೆ ನೀನು
ಬೆಳಕಿನ ಕಿರಣ ಅಂತ ಬರೆದಿರುವೆ

ಆ ಪುಟದಲ್ಲಿ ಆರಾಮವಾಗಿರುವ ಆ ಪದ
ಸುಂದರವಾಗಿದೆ, ನಿನ್ನನ್ನು ತಟ್ಟುತ್ತದೆ -
ನಿನ್ನ ಗೆಳೆಯನ ಅಸ್ತಿತ್ವದಂತೆ.

ಮತ್ತು ಬೆಳಕಿನ ಕಿರಣ ಆ ಗೆಳೆಯ
ದೂರದೂರಿನಿಂದ ಕಳಿಸಿದ ಉಡುಗೋರೆಯಂತೆ -
ಈ ಮುಂಜಾನೆ ನಿನ್ನನ್ನು ಖುಷಿಪಡಿಸಲು ಬಂದಂತಿದೆ

ನಿನ್ನೆಲ್ಲ ಕರ್ತವ್ಯಗಳ ನಡುವೆ
ಖುಷಿಯೂ ಅವಶ್ಯ
ಎಂದು ನೆನಪಿಸುವಂತಿದೆ

ಅದನ್ನೂ ಸಾಧಿಸಬೇಕು.
ನೆನಪಿದೆಯೇ?
ಸಮಯ ಮತ್ತು ಬೆಳಕು

ಪ್ರೀತಿಯ ಮಾದರಿಗಳು
ಮತ್ತು ಪ್ರೀತಿಯೂ ಕಾಫಿ ಯಂತ್ರದಷ್ಟೇ
ಅಥವಾ ಕಾರಿನಲ್ಲಿರುವ ಸ್ಟೆಪ್ನಿಯಷ್ಟೇ

ಉಪಯುಕ್ತವಾದದ್ದು,
ಅವಶ್ಯವಾದದ್ದು. ನಾಳೆ ಏನು ಕಾದಿದೆಯೋ
ತಿಳಿದವರು ಯಾರು?

ಆದರೆ ಈ ದಿನ ದೇಶಾಂತರ ಹೊರಟ
ಹೃದಯದಿಂದ ತಾರು ಬಂದಿದೆ
ಸಂಸ್ಥಾನ ಇನ್ನೂ ಇದೆ

ರಾಜನೂ ರಾಣಿಯೂ ಇನ್ನೂ ಇದ್ದಾರೆ
ಸೂರ್ಯನ ಬೆಳಕಿನಲ್ಲಿ ಕೂತು
ಕೇಳಿಸಿಕೊಳ್ಳಲು ಸಮಯವಿರುವ

ಯಾವುದೇ ಮಕ್ಕಳೊಂದಿಗೆ ಅವರು
ಮಾತಾಡುತ್ತಲೂ ಇದ್ದಾರೆ
ಅಂತ ಆ ತಾರಿನಲ್ಲಿದೆ.