Sunday, September 24, 2006

ಆ ದಿನ

ವರವರರಾವು
[ತೆಲುಗು]

ಹೇಳದೇ ಬಂದೆನೆಂದಲ್ಲ,
ಹೇಳಬೇಕಾದ್ದು ಎಂದಿಗೂ ಉಳಿದಿರುತ್ತದೆ
ಊಹಿಸದೇ ನಡೆದದ್ದು ಎಂದೂ ಅಲ್ಲ
ಊಹಿಸಿದ್ದು ನನ್ನನುಕೂಲಕ್ಕೇ ನಡೆವುದೆಂದು
ಯಾವಾಗಲೂ ಏನೋ ಒಂದು ಆಸೆ
ಯಾವ ವಾಕ್ಯವೂ ಅರ್ಧಕ್ಕೆ ನಿಂತಿಲ್ಲ
ಯಾವ ಕೆಲಸವೂ ನಿಂತುಹೋಗಿಲ್ಲ
ಯಾವ ಅನುಭವವೂ ಅರ್ಧಕ್ಕೇ.....

ಸಮಸ್ಯೆ ಅದಲ್ಲವೇ ಅಲ್ಲ
ಅಲ್ಲಿ ಕಾಲ ನಿಲ್ಲಲಿಲ್ಲ
ಕಾಲ ಮನವ ತೆರೆದಿಟ್ಟಿತು
ಅಷ್ಟೇ

ಸಿಹಿಕಹಿಗಳ
ಭೇದವನಳಿಸಿಹಾಕಲು
ನಾವು ದಿನದಿನವೂ ನಿದ್ರೆ ಕೆಡಿಸಿಕೊಂಡೆವು
ಗುಬ್ಬಿಗೂಡಲಿ, ರೆಕ್ಕೆಗಳಲಿ
ಹುದುಗಿದ ಇಪ್ಪತ್ತು ಹೇಮಂತಗಳ
ಉಗುರುಬಚ್ಚನೆ ಅನುಭವ
ಒಂದು ಕಹಿವಾಸ್ತವದಲ್ಲಿ ಕರಗಿ...
ನಾಳೇಯೇ ಹೊರಡಬೇಕೇ ಎಂದೆನ್ನುವಷ್ಟರಲ್ಲಿ
ಬೆಳಗಿಗಾಗಲೇ ನಾಳೆ ಇಂದಾಗಿದೆ.

ಅರೇ ಆಗಲೇ ಕರೆದೊಯ್ಯುವಿರಾ
ಎಂದು ನೀನಾತಂಕಪಡುವಾಗ
ನಿನ್ನ ಕಣ್ಣೆದುರಿಗೇ
ನನ್ನ ಕೈಗಳಿಗೆ ಬೇಡಿ

ದೃಶ್ಯವನು
ಲಘುದೀರ್ಘ ಚತುರತೆಯಲಿ
ಕತ್ತರಿಸಿದ "ಜಾಲೀ ಮುಲಾಕಾತ್" ನಿಂದ
ನಿಂತುಬಿಟ್ಟ ಮಾತು
ಕಣ್ಣ ಮೀರಿದ ಹನಿಯಾಗಿ
ಕಂಡರೆ ಕರುಣೆಯಿಂದ ಕಾಣುವೆ
ಎಸ್ಕಾರ್ಟ್ ವ್ಯಾನ್ ಗುರ್ರೆನ್ನುವುದು
ಧೂಳೆಬ್ಬಿಸುವುದು
ವಾಸನೆ ಅಡರುವುದು
ನೋಟ ಒಳಕ್ಕಿಟ್ಟುಕೊಂಡರೆ
ಖಾಕಿ ಬಟ್ಟೆಗಳೂ, ರೈಫಲ್‌ಗಳೂ
ನೋಡುತ್ತಿರುತ್ತವೆ.
ಮನಸು ಛಿಲ್ಲೆನ್ನುವುದು
ಸಿಟ್ಟಾಗುವುದು
ಪೆಟ್ರೋಲ್ ವಾಸನೆಯಲಿ
ಹೊಟ್ಟೆಯೊಳಗಿನ ನರ ಮೌನವಾಗಿ ಕನಲುವುದು
ನಿಮ್ಮಿಂದ ಬಂದ ಹೊರಪ್ರಪಂಚದ
ನೋಟವ
ಒಳ ಪ್ರಪಂಚದೊಳಗಣ ನಿಮ್ಮೊಳಕ್ಕೆ ತಿರುಗಿಸುವೆ.

ಕಾಲಕ್ಕೂ ನನಗೂ ಎರಡೇ ಕಾಲು
ಹಗಲು - ರಾತ್ರೆ
ಸ್ವಲ್ಪ ಬೇಗ ನಡೆಯ ಬೇಕೆಂಬ ಆಸೆಯಲಿ
ಕಾಲ ಸೆಕೆಂಡುಗಳ ಏದುಸಿರು ಹಿಡಿದು
ನಾನು ಲೇಖನಿ ಹಿಡಿದು
ಸಾಗುತ್ತಲೇ ಇರುತ್ತೇವೆ
ಸಾಗಿಸುತ್ತಲೇ ಇರುತ್ತೇವೆ

ಶತ್ರುವಿಗೆ ನಾಲ್ಕು ಕಂಗಳಿವೆ
ಟೆಲಿಕಿವಿ, ಟೆಲಿದೃಷ್ಟಿ, ವಯರ್‌ಲೆಸ್‌ ಬಾಯಿದೆ
ಆಯುಧಗಳ ಕೈಗಳಿವೆ
ಎಲ್ಲಕ್ಕಿಂತ
ತಾನೊಬ್ಬನೇ ಬದುಕಬೇಕೆಂಬ ಮಹದಾಸೆಯಿದೆ
ಅದಕ್ಕೆಂದೇ
ಹೃದಯವನ್ನ ಕೊಂದ
ಅದಕ್ಕೆಂದೇ ಹೃದಯ ಸ್ಪಂದನವ ಕೊಂದ--
ಹೃದಯವಿಲ್ಲದವರಲ್ಲಿ
ಯಾವ ಭಾಷೆ ಆಡುವುದು!

ಬೇಟೆ ನಾಯಿ ಜೋತಾಡುವು ನಾಲಿಗೆ,
ಕತ್ತಿನ ಬೆಲ್ಟು
ಧುಮುಗುಡುವ ಮಾಲೀಕನ ಕೈಲಿರುವ ಹಂಟರ್
ಎಲ್ಲವೂ ತನ್ನ ಅಂತಸ್ತೆಂದುಕೊಳ್ಳುವುದು
ಭಾವಕ್ಕೆ ಸಂಕೋಲೆ ಹಾಕುವುದು - ಅಪರಾಧವೆಂದು
ಯಾವ ಭಾಷೆಯಲಿ ಹೇಳುವುದು?

ಆಸ್ತಿ
ಮಾನವ ಪ್ರಪಂಚವನ್ನು
ಕಾವಲುಗಾರರಾಗಿ, ಅಪರಾಧಿಗಳಾಗಿ ಹಂಚಿಬಿಟ್ಟಿತು
ನಾನು ಆ ಅದನ್ನೇ ತೆಗೆದುಹಾಕುತ್ತೇನೆಂದರೆ
ಆ ಆಸ್ತಿಯ ಕಟಕಟಯಲಿ ಅಪರಾಧಿಯಾಗಿ
ಕಾಮಾಲೆ ಕಂಗಳಿಗೆ ಕಮ್ಯುನಿಸ್ಟನಂತೆ
ಅದಕ್ಕಿಂತ ದೊಡ್ಡ ಆರೋಪವೇ ಇಲ್ಲವಂತೆ
ಆತ ನನ್ನನ್ನು ನಕ್ಸಲೈಟ್ ಎನ್ನುವನು

ಅದೇ ಸತ್ಯವಾಗುವಂತೆ ನಾವು ನಿರೀಕ್ಷಿಸೋಣ
ಜನಕ್ಕಾಗಿ ನಾವು "ರಾಜದ್ರೋಹ" ಎಸಗೋಣ


any forcible separation from loved ones is of course very painful. But even worse is the sense of utter helplessness. There is nothing we can do about it. Such a person feels that there was something unsaid, a sentence cut in the middle, a melody abruptly stopped. It now feels as if even a minute's re-union would enable the undaid to be said, the sentence or the melody completed. If only... if.... if...
Ngugi [Detained: A Writer's Prison Dairy]



No comments: