Sunday, January 28, 2007

ಪವಾಡ

ಲಿಯೋನಿಡ್ ಮಾರ್ಟಿನೋವ್
[ರಷ್ಯನ್, ಇಂಗ್ಲೀಷ್ ಅನುವಾದ: ಪೀಟರ್ ಟೆಂಪೆಸ್ಟ್]

ಆ ಬೆಚ್ಚಂಬೆವರಿನ ರಾತ್ರೆ
ನಾನು ದೇವರೊಂದಿಗೆ ಮಾತಾಡುತ್ತಿದ್ದೆ
ದೇವರು ಹೆಚ್ಚೇನೂ ಹೇಳುತ್ತಿಲ್ಲ ಅನಿಸುತ್ತಿತ್ತು
"ನನಗೊಂದು ಪವಾಡ ಮಾಡಿ ತೋರಿಸು!"
ಹೀಗೆಂದು ಪ್ರಾರಂಭಿಸಿದೆ.

ಆತ ಉತ್ತರಿಸಿದ:
"ಮಗೂ, ನೋಡು ನಿನ್ನ ಕೂದಲು ಬೆಳ್ಳಗಾಗುತ್ತಿಲ್ಲ,
ಅದು ಉದುರುತ್ತಲೂ ಇಲ್ಲ! ಹಾಗೆ ನೋಡಿದರೆ ನಿನ್ನ ಕೈ ಕಾಲುಗಳೂ
ಸವೆದು ಸಣ್ಣಗಾಗಿಲ್ಲ. ನೀನು ತೊಂದರೆಗಳ ಎಷ್ಟು ಭಾರ
ಹೊರುತ್ತಿದ್ದೀಯೆಂದು ನನಗೆ ಗೊತ್ತು, ಆದರೂ.
ನೀನು ಚಲಿಸುತ್ತಿರುವ ಪಥದತ್ತ ಒಮ್ಮೆ ತಿರುಗಿ ನೋಡು
ಎಂಥೆಂಥ ಕಡಿದಾದ ಹಾದಿಯನ್ನು ನೀನು ಕಣ್ಮುಚ್ಚಿ ಕ್ರಮಿಸಿದ್ದೀಯ
ಆ ದಾರಿಯಲ್ಲಿ ಮಂಜೂ ರಕ್ತದಷ್ಟೇ ಕಡುಕೆಂಪಾಗಿ, ಉಪ್ಪಾಗಿತ್ತು.
ಈ ದಾರಿ ಕ್ರಮಿಸಿ ಬಂದಿರುವುದೇ ಒಂದು ಪವಾಡವಲ್ಲವೇ ಮಾನವಾ?
[೧೯೪೯]

Saturday, January 27, 2007

ಕುಂಟೋಬಿಲ್ಲೆ

ಎ.ಕೆ.ರಾಮಾನುಜಮ್
[ಕನ್ನಡ]

ಇದು ಚದುರಂಗ
ಅಲ್ಲ, ಮನೆಹಿಂದಿನ ಸಂದಿ
ಯ ಕುಂಟೋಬಿಲ್ಲೆ.

ಎರಡುಕಾಲಿನ ಇಡೀದೇಹ
ಮನೆಯಿಂದ ಮನೆಗೆ ಚಾಪುಹಾಕಿ
ಅದನ್ನರಸಿ ಕುಂಟುತ್ತ ಒದ್ದು

ಆಚೆದಡ ಮುಟ್ಟಿ ಒಂದು ಗಳಿಗೆ ಮಾತ್ರ
ಎರಡೂಕಾಲು ಊರಿ ವಿರಾಮ ಕಂಡು
ಥಟ್ಟಂತ ತಿರುಗಿ ಒಂಟಿಕಾಲಿನಲ್ಲಿ

ಹೊರಟಲ್ಲಿಗೇ ಮತ್ತೆ ತವರಿಗೆ
ಬಂದು ಸೇರುವ - ಗಂಡಸ್ತನ
ಬಲಿಯುವ ಮೊದಲು ಗಂಡು

ಮಕ್ಕಳು ಕೂಡ ಮೈಮರೆತು
ಆಡುವ - ಹೆಣ್ಣುಮಕ್ಕಳ
ಮೈನೆರೆಯುವಾಟ.
ನಮ್ಮ ಮನೆ

ಸಂದಿಯ ಈ ಆಟವನ್ನೇ
ಆಫ್ರಿಕದಲ್ಲಿ ಜರ್ಮನಿಯಲ್ಲಿ ಕಂಡು
ಆಶ್ಚರ್ಯವಾದರೂ ಬಾಂಬು ಪೋಲಿಯೋ
ಇತ್ಯಾದಿ ವಕ್ರಿಸಿದ ಕಾಲಿದ್ದರೆ
ಕಪ್ಪು ಬಿಳಿ ಹಳದಿ ಮೈ ಎಲ್ಲ
ಆಡುವುದು ಎಲ್ಲೆಲ್ಲೂ ಕುಂಟೋಬಿಲ್ಲೆ

ಆಟವೇ ಅಂತ ಅನಿಸಿ
ಪಕ್ಕದ ಮನೆಯಲ್ಲಿ ಆಫ್ರಿಕ
ಎದುರು ಮನೆಯಲ್ಲಿ ಜರ್ಮನಿ

ಚಿಕ್ಕಂದು ಮುಕ್ಕಿದ ಬೀದಿ ಮಣ್ಣಲ್ಲಿ ವಿಶ್ವ
ರೂಪ ಕಂಡಹಾಗಾಗಿ ಒಂದು ನಿಮಿಷ
ತಬ್ಬಿಬ್ಬಾಯಿತು.