ಕೆ.ವಿ.ತಿರುಮಲೇಶ್
[ಕನ್ನಡ]
ನಿಮಗೀಗ ಬುಲ್‍ಚಂದನ ವಸ್ತ್ರದ ಮಳಿಗೆಗೆ ಹೋಗಬೇಕಲ್ಲವೇ?
ವೈವಿಧ್ಯವನ್ನು ಅರಸುವ ನೀವು ಸರಿಯಾದ ಅಂಗಡಿಯನ್ನೇ
ಆರಿಸಿದಿರಿ. ಈಗ ನಾವು ಈ ರಸ್ತೆಯನ್ನು ದಾಟಬೇಕಾಗಿದೆ.
ತುಸು ತಾಳಿರಿ. ಸಂಜೆ ಯಾವಾಗಲೂ ಇಲ್ಲಿ ಜನಸಂದಣಿ ಜಾಸ್ತಿ.
ಎಡಗಡೆಯಿಂದ ಸಾಲುಗಟ್ಟಿ ಬರುತ್ತಿರುವ ಈ ಮೋಟಾರು
ವಾಹನಗಳು ಹೋಗಿಕೊಳ್ಳಲಿ. ಬಲಗಡೆಯಿಂದಲೂ ಬರುತ್ತಿವೆ.
ಅಬೀಡ್ಸಿನಲ್ಲಿ ರಸ್ತೆ ದಾಟುವುದೆಂದರೆ ಪ್ರಾಣವನ್ನು
ಜೇಬಿನಲ್ಲಿರಿಸಿ ಹಾಕಿಕೊಂಡಿರಬೇಕು. ನೋಡಿದಿರ,
ಆ ಡಬಲ್ ಡೆಕ್ಕರಿನ ಕಿಟಕಿಗಳು ಬುಲ್‍ಚಂದನ ಬೆಳಕುಗಳನ್ನು
ಹೇಗೆ ತುಂಡರಿಸಿ ಹೋದವು! ಆದರೆ ಅವು ಮತ್ತೆ
ಜಗಜಗಿಸುತ್ತಿವೆ. ಬುಲ್‍ಚಂದನ ಬೆಳಕುಗಳೇ ಹಾಗೆ.
ಈಗ ನುಗ್ಗಿಬಿಡಿ. ಈ ಕಾರು ಮತ್ತು ಆ ಸ್ಕೂಟರಿನ ನಡುವೆ
ರಸ್ತೆ ದಾಟಿಬಿಡುವ. ಕೇಳಿಯೂ ಕೇಳಿಸದಂತೆ ಇದ್ದ ಸದ್ದು
ಸ್ಕೂಟರಿನವನು ಬಯ್ದದ್ದು. ಪೋಲೀಸನ ಬಿಗಲಿನಂತೆ ಕಿರುಚಿದ್ದು
ಕಾರಿನ ಬ್ರೇಕು. ಅಂತೂ ದಾಟಿದ ಮೇಲೆ ಹೇಗನ್ನಿಸುತ್ತಿದೆ
ನಿಮಗೆ? ನಿರಂತರವಾದ ಈ ರಸ್ತೆಯನ್ನು ತುಂಡರಿಸಿಬಿಟ್ಟೆವು
ಎಂದೆ? ಆದರೆ ಎಷ್ಟು ಬೇಗ ಅದು ಮತ್ತೆ
ಒಂದಾಯಿತು ನೋಡಿ... ನಾವು ದಾಟಿಬಂದದ್ದೇ ಇಲ್ಲ
ಎಂಬಂತೆ. ಅಬೀಡ್ಸಿನ ರಸ್ತೆಗಳೇ ಹಾಗೆ.
Noise and Clutter
6 years ago
1 comment:
srIraam, tuMbaa chennagide nimma I blog
naanu kelavu vaRsha hydrabad nallidde tirumalesh avara kavana
hELida saMgatigaLu nanna anubhava sahaa...hyd nenapisida kavana Odi kuShi aayitu
tuBaa Odalu saraku ide nimma blog nalli matte baruve
Post a Comment