Sunday, October 01, 2006

ತುಂತುರುಗಳು

ಎಚ್.ಎಸ್.ಬಿಳಿಗಿರಿ
[ಕನ್ನಡ]

ಪೋಪೋಪಡೆ ಹಿಟ್ಲರ ಪಡೆ
ಹಾಕಿದರೂ ಮಟ್ಟ
ಧೃತಿಗೆಡದಲೆ ಹೊಗೆಯುಗುಳುವ
ಚರ್ಚಿಲ್ಲನ ಚುಟ್ಟ;
ಜಡಿದರು ಮಳೆ, ಪೊತ್ತರು ಇಳೆ
ಉರಿಬಿಸಿಲಿನ ಕಾಟ
ವಿರಮಿಸುತಲಿ ಮಲಗುವ ಸೋ-
ಮಾರಿಯ ಸಿಗರೇಟ;

ಜ್ಞಾಪಿಸುವೊಲು ನಿಂತಿವೆ ಭ-
ದ್ರಾವತಿಯೊಳು, ರಮಣಿ
ಗಗವವನೆ ತಿವಿಯುವವೊಲು
ಹೊಗೆಯುಗುಳುವ ಚಿಮಣಿ!

****

ಬಿಸಿನೀರ ಕಾವಿನಿಂ-
ದವಳ ಮೊಗ ಕೆಂಪೇರಿ-
ದುದ ಕಂಡು ನನ್ನ ಮನ ಕುದಿಯಿತಲ್ಲ!
ಬಿಸಿನೀರೆ! ನೀ ಧನ್ಯ!
ಅವಳ ಮೊಗವನು ನೀನು
ಮುತ್ತಿಟ್ಟು ಕೆಂಪೇರಿಸಿರುವೆಯಲ್ಲ!

***

ಭೂತವಾದರು ಸರಿಯೆ ಮನುಜಗೆ
ಹೆದರಿ ನಿಲ್ಲದು ಅರೆಚಣ.
ಎಷ್ಟು ಧೈರ್ಯವೊ ಮೂಗ ಮೇಲೆಯೇ
ಬಂದು ಕೂರ್ವುದು ಈ ನೊಣ!

***

ಕರಿಯ ಹುಡುಗಿಯು ನಗಲು ಕಾಣುವ
ಬಿಳಿಯ ಹಲ್ಲಿನ ಮಿಂಚೊಲು
ಬೆಂಗಳೂರಿನ ಟಾರ ರೋಡೊಳು
ಬೆಣಚುಕಲ್ಲಿನ ಗೊಂಚಲು!

***

ಮರಗಳೆಲೆಯ ನಡುವೆ ಕಾಂಬ
ತುಂಬುವೆರೆಯ ಚೆಲುವಿಗೆ
ಸಾಟಿಯೇನು ಬರಿಯ ಕಣ್ಗೆ
ತೋರ್ವ ಚಂದ್ರಮಂಡಲ?

ಒಡಲು ಕಂಡು ಕಾಣದಂಥ
ಅರ್ಧ ನಗ್ನ ಸುಂದರಿ
ಮನ ಸೆಳೆವೊಲು ಸೆಳೆವಳೇನು
ಪೂರ್ಣನಗ್ನ ರಮಣಿಯು!

No comments: