Showing posts with label ಶ್ರೀರಾಮ್. Show all posts
Showing posts with label ಶ್ರೀರಾಮ್. Show all posts

Friday, June 13, 2008

ಕೀರ್ತನೆ

ಕೆ.ವಿ.ತಿರುಮಲೇಶ್


[ಕನ್ನಡ]
ಯನ್ನ ತಲೆಯನ್ನ ಸೋರೆ ಮಾಡಿ
ಯನ್ನ ನರಗಳನ್ನ ತಂತಿ ಮಾಡಿ
ನಿನ್ನ ಸ್ವರೂಪವನ್ನ ಯನ್ನಿಂದ ಧ್ವನಿಸಿ
ಗೊಂಬೆಯಾಟವಯ್ಯಾ ಎಂದು ಕುಣಿಸಿ
ಮಣಿಸಿ ದಣಿಸಿ
ದಾಸರ ದಾಸ ಚಪ್ರಾಸಿ ಮಾಡ್ಕೋ
ತಲೆಮೇಲೆ ಕೂತ್ಕೋ
ಯನ್ನ ನೆತ್ತರು ಕುದಿಸಿ ದಾಮರು ಮಾಡ್ಕೋ
ರೋಡಿಗೆ ಹಾಕ್ಕೋ
ಓಡ್ಸು ಅದರ ಮೇಲೆ ನಿನ್ನ ಇಂಪಾಲಾ
ಯನ್ನ ಚರ್ಮವ ಚಪ್ಪಲಿ ಮಾಡ್ಕೋ
ಹಾಕಿಕೋ ತುಳ್ಕೋ
ಖಂಡವಿದೆಕೋ ಮಾಂಸವಿದಿಕೋ
ಬೇಕಾದ್ರೆ ಬೇಯಿಸ್ಕೋ
ಉಂಡು ತೇಗು ಕ್ಕೊಕ್ಕೋ
ತಗೋ ಯನ್ನ ಮೂಳೆ
ನಿನ್ನ ತ್ರಾಣಕ್ಕೆ ಒಳ್ಳೇದು
ಸೂಪು ಮಾಡಿ ಕುಡೀ.


Thursday, June 12, 2008

ಜಿಗಿತ

[ತೆಲುಗು]


ಗಂಜ್ ಲಾಕಪ್ಪಿನಿಂದ
ಹುಣ್ಣಿಮೆಗೆ ಮೊದಲು ಕಾಣುವುದಿಲ್ಲ ಚಂದ್ರ
ಕಗ್ಗತ್ತಲ ದಿನಗಳಲಿ ಮಾತ್ರ
ಕಂಬಿ ಸರಳುಗಳೆದುರು
ಜೈಲು ಗೋಡೆಗಳ ದಾಟಿ, ಲೈವ್ ವಯರುಗಳ ಮೂಲಕ
ಆಕಾಶದತ್ತ ಆಸೆಯಿಂದ ನೋಡುತ್ತಾ ಕೂತರೆ
ಬೆಳುದಿಂಗಳ ಸುದ್ದಿಯಂತೆ ಉದಯಿಸುವನು ಚಂದ್ರ

ಲಾಕಪ್ಪಿನಲ್ಲಿ ಬೆಳುದಿಂಗಳು ಕಣ್ಣಿಗೆ ಕಟ್ಟಬೇಕೆಂದರೆ ಮಾತ್ರ
ಕರೆಂಟು ಹೋಗಲೇಬೇಕು
ಆಗ ಎಲೆಗಳ ಮೇಲಣ ಹಸುರೂ ಬೆಳುದಿಂಗಳೇ
ಹೂವಿನೊಳಗಣ ಪರಾಗವೂ ಬೆಳುದಿಂಗಳೇ
ನೆಲವೆಲ್ಲಾ ಬೆಳುದಿಂಗಳೇ

ಆಕಾಶವೊಂದು ಮೌನ ಸಂಗೀತದಂತೆ
ಕಡೆಗೆ ಗಲ್ಲುಗಂಭವೂ ಬೆಳುದಿಂಗಳ ಮೆಲುಕುಹಾಕುವಂತೆ!
ಚೆಲ್ಲಿದೆಯೇ ಬೀಸಿದೆಯೇ ಬೆಳುದಿಂಗಳು
ಜೋತಾಡುತ್ತಿದೆಯೇ ಗಲ್ಲುಗಂಭಕ್ಕೆ
ನನ್ನೂಹೆಯೊಳಗಣ ಸೌಂದರ್ಯವಾಗಿ
ಆವರಿಸಿದೆಯೇ ಭೂಮ್ಯಾಕಾಶಗಳನು

ಉಹುಂ.. ಅನುಭವ ಬಿಟ್ಟು ಬೇರೇನೂ ವಿಶ್ಲೇಷಣೆ ಹೊಂದದು ಬೆಳುದಿಂಗಳಿಗೆ

ಗಂಜ್ ಲಾಕಪ್ಪಿನಲ್ಲಿ
ಕರೆಂಟು ಹೋದ ಹೊರತು ಕಾಣುವುದಿಲ್ಲ ಬೆಳುದಿಂಗಳು
ಗಂಜ್ ಲಾಕಪ್ಪಿನಲ್ಲಿ
ಕಗ್ಗತ್ತಲ ದಿನದ ಹೊರತು ಕಾಣಿಸದು ಚಂದ್ರ
ಯಾವುದು ಮೊದಲು ಹೇಳಿ ಯಾವುದಾಮೇಲೆ ಹೇಳಿದರೂ
ಹೇಗೆ ತಲೆಕೆಳಗು ಮಾಡಿದರೂ
ಬಂಧನದಲ್ಲಿ ಸ್ವಾತಂತ್ರ ಅರಿವಾದಂತೆ
ಕಗ್ಗತ್ತಲೆಯ ಬಿಟ್ಟು ಬೆಳುದಿಂಗಳು
ನಿನ್ನ ಚೈತನ್ಯದಲ್ಲಿ ಹರಿಯದು

ಸಣ್ಣ ಮಿಂಚು: ತುಂಬು ಚಂದ್ರನಷ್ಟೇ ಅಲ್ಲ
ಹುಣ್ಣಿಮೆದಿನ ಲಾಕಪ್ಪಿನಲ್ಲಿ; ಚಂದ್ರ
ಕಣ್ಣು ತೆರೆದಷ್ಟೂ ಸಾಲದೆಂಬಂತೆ
ಕಾಣಿಸುವನು ಗಂಜ್‌ನಲ್ಲೂ


Sunday, June 08, 2008

ಪ್ರಯೋಜನವಿಲ್ಲ

ವಿಕ್ಟರ್ ಜಸಿಂಟೋಫ್ಲೇಚಾ
[ತೆಲುಗಿಗೆ: ವರವರ ರಾವು]

ಪ್ರಯೋಜನ ಇಲ್ಲ
ನಿನ್ನ ಮನೆಯ ಕಗ್ಗತ್ತಲ ಮೂಲೆಯಲಿ ಆಳದಲ್ಲಡಗಿ
ನಿನ್ನ ಮಾತನು ಮರೆಸಿ
ನಿನ್ನ ಪುಸ್ತಕವ ಸುಟ್ಟು
ಪ್ರಯೋಜನವಿಲ್ಲ

ಲಾರಿಗಳಲಿ ರಾಶಿ ರಾಶಿ ಕರಪತ್ರ ಸೇರಿಸಿಟ್ಟು
ನಿನಗ್ಯಾರೂ ಎಂದೂ ಬರೆಯದ ಪತ್ರವ ಹಿಡಿದು
ಅವರು ನಿನ್ನ ಹಿಡಿಯಲು ಬರುವರು
ನೀನೆಂದೂ ಹೋಗದ ದೇಶಗಳ ಮುದ್ರೆಗಳೊಂದಿಗೆ
ನಿನ್ನ ಪಾಸ್ಪೋರ್ಟ್ ತುಂಬಿಬಿಡುವರು
ಯಾವುದೋ ಸತ್ತ ನಾಯಿಯಂತೆ
ನಿನ್ನನವರು ಹೊರಗೆಳೆಯುವರು
ರಾತ್ರೆ ನೀನು ಹಿಂಸೆಯೆಂದರೇನೆಂದು ತಿಳಿಯುವೆ
ಕತ್ತಲ ಕೋಣೆಯಲಿ
ಪ್ರಪಂಚದ ದುರ್ಗಂಧ ಇಡೀ ಹುಟ್ಟುವೆಡೆ

ನನ್ನ ಗೆಳೆಯ
ಹೋರಾಟದಿಂದಾಗಿ
ನಿನಗೇನೂ ಪ್ರಯೋಜನವಿಲ್ಲ


Sunday, March 23, 2008

ಕಾರಾಗೃಹದಲ್ಲಿ ಸಂಜೆ

ಫೈಜ್ ಅಹಮದ್ ಫೈಜ್


[ಉರ್ದು]

ಸಂಜೆಯೊಳಕ್ಕೆ ನಕ್ಷತ್ರಗಳು ಸುರಳಿ ಸುತ್ತುತ್ತವೆ
ರಾತ್ರೆಯ ಮೆಟ್ಟಿಲುಗಳು ಮೇಲಿಂದ ಇಳಿಯುತ್ತವೆ
ಯಾರೋ ಪ್ರೀತಿಯ ಬಗ್ಗೆ ಮಾತಾಡಿದ ಹಾಗೆ
ಗಾಳಿ ಸಮೀಪಕ್ಕೆ ಬಂದು, ಹಾಗೆಯೇ ಮುಂದಕ್ಕೆ ಬೀಸುತ್ತದೆ
ಚಾವಡಿಯಲ್ಲಿನ ಮರಗಳು ಆಕಾಶಕ್ಕೆ
ಕಸೂತಿಯ ಹೊದಿಕೆ ಹೊದ್ದಿಸುವಲ್ಲಿ
ಮಗ್ನರಾಗಿರುವ ಹೊರನಾಡಿಗರು.

ಸೂರು ಹೊಳೆಯುತ್ತದೆ, ಚಂದ್ರ ತನ್ನ
ಕೈಗಳಿಂದ ಧಾರಾಳವಾಗಿ ಬೆಳಕು ಚೆಲ್ಲುತ್ತಾನೆ
ನಕ್ಷತ್ರಗಳ ಭವ್ಯತೆ ಧೂಳಿನೊಂದಿಗೆ ಸೇರುತ್ತದೆ
ನೀಲಿ ನಕ್ಷತ್ರವನ್ನು ತೀಡಿ ಬೆಳಕು ಬೆಳ್ಳಿಯಾಗಿಸುತ್ತದೆ
ಎಲ್ಲ ಮೂಲೆಗಳಲ್ಲೂ ನೆರಳು ಬೆಳೆದು ದೊಡ್ಡದಾಗುತ್ತದೆ
ವಿರಹದ ಅಲೆಯಲ್ಲಿ
ಹೃದಯವು ಎದ್ದೆದ್ದು ಪುಟಿಯುವಂತೆ

ಹೃದಯ ಹಿಂದಿರುಗುವ ವಿಚಾರವಿದೇನೆ -
ಜೀವನ, ಈ ಕ್ಷಣಕ್ಕೆ, ಸಿಹಿಯಾಗಿದೆ
ಬೇಕಿದ್ದರೆ ಪಿತೂರಿಕಾರರು ವಿಷವನ್ನು ತಯಾರಿಸಲಿ
ಅವರಿಗೆಂದೂ ಸಫಲತೆ ಸಿಗುವುದಿಲ್ಲ
ಪ್ರೇಮಿಗಳ ಕೋಣೆಯಲ್ಲಿ
ಅವರು ಬೆಳಕನ್ನು ಊದಿ ದೀಪವನ್ನು ನಂದಿಸಬಹುದು
ಆದರೆ ಚಂದ್ರನನ್ನು ಅಳಿಸಿಹಾಕುವುದಕ್ಕೆ ಸಾಧ್ಯವೇ?


Thursday, March 20, 2008

ಬ್ಯಾಂಡ್‌ಸ್ಟ್ಯಾಂಡಿನ ಬಂಡೆಗಳು

ಯಶವಂತ ಚಿತ್ತಾಲ



[ಕನ್ನಡ]
ಲಬಸಾಗಳು


ಬಾಂದ್ರಾದಲ್ಲಿ ಬ್ಯಾಂಡ್‍ಸ್ಟ್ಯಾಂಡಿನ ಬಂಡೆಗಳು ಪ್ರಖ್ಯಾತ.
ಹಬ್ಬಿಕೊಂಡಿದೆ ನೆಲದ ಈ ತುದಿಯಿಂದ ಸಮುದ್ರ ದಂಡೆಗೆ ಹತ್ತ
ಕಣ್ಣು ಹಾಯುವ ಆ ತುದಿಯವರೆಗೂ. ಕಪ್ಪಗೆ ಗಟ್ಟಿ
ಕಬ್ಬಿಣದ ಹಾಗೆ. ಉಕ್ಕಿನಂಥಹ ಪಾಷಾಣದ ಕಲ್ಲು ಹಾಸಿಗೆ
ಹಾಸಿ ಮಲಬಿವೆ ತೆಪ್ಪಗೆ ಉದ್ದೋ ಉದ್ದಕ್ಕೆ.

ಸಹಸ್ರಾರು ವರ್ಷಗಳ ಹಿಂದೆ ಎದ್ದು ಬಂದುವಂತೆ
ಭೂಗರ್ಭದ ಆಳದಿಂದ. ನಿಗಿ ನಿಗಿ ಉರಿಯುವ ಕುಂಡದಿಂದ.
ಬರುವಾಗಲೇ ಬೆಂಕಿಯ ಉಂಡೆಗಳಾಗಿ, ಹೊತ್ತು ಸಿಡಿಯುವ
ಕೆಂಡಗಳಾಗಿ. ಮುಂದೆ ಬಹಳ ಮುಂದೆ ಬಂಡೆಗಳಾಗಿ ತಣ್ಣಗಾದುವಂತೆ

ಕಂಡವರಿಲ್ಲ ಯಾರೂ ಈ ತಣ್ಣಗಾಗುವ, ಅಗ್ನಿಶಿಖೆ
ಶಿಲೆಯಾಗಿ ಆರುವ ನಿಗೂಢ ಪ್ರಕ್ರಿಯೆಯನ್ನು
ಕಂಡವ ಹಾಗೇ ಹೇಳುತ್ತಾರೆ. ಅಳೆಯುತ್ತಾರೆ ಕೂಡ ಈ
ಇಳಾಸಂತತಿಯ ಹೆರೆಯವನ್ನು, ಜನ್ಮ ಕೊಟ್ಟವಳದೇ
ಜನ್ಮ ತಾರೀಖನ್ನು ಅಳೆದೇ ಕಂಡುಹಿಡಿಯುವ ನಿಷ್ಣಾತರು! ಬರೇ
ಕಲ್ಲಲ್ಲವಂತೆ: ಕಾಲಾಂತರದಲ್ಲಿ ಗಟ್ಟಿ ಹೆಪ್ಪುಗಟ್ಟಿದ ಕಾಲ
ಪ್ರವಾಹದ್ದೇ ತೊರೆ, ಬಂಡೆಯೆಂದರೆ!




ಕಂಡವರೂ ಇದ್ದರಂತಲ್ಲ ಕಲ್ಲಿನಲಿ ದೇವರ ರೂಪವನ್ನು?
ವಿಶ್ವದ ಭವ್ಯ ರೂಪವನ್ನು ಕಲ್ಪಿಸಿಯೇ ಮೈಮರೆತ
ಅದ್ಭುತರು, ಒಂದಾನೊಂದು ಕಾಲದಲ್ಲಿ?

ಶಿವನಾತ್ಮಲಿಂಗ, ಚತುರ್ಭುಜ ವಿಷ್ಣು, ಧ್ಯಾನ ನಿಮಗ್ನ ಗೌತಮ ಬುದ್ಧ,
ಆಕಾಶದೆತ್ತರಕೆ ಬರಿ ಮೈಯಲ್ಲಿ ತಲೆಯೆತ್ತಿ ನಿಂತ ಗೊಮ್ಮಟೇಶ್ವರ
ಲಕ್ಷೋಪಲಕ್ಷ ಇಂಥ ದಿವ್ಯ ಚೇತನರನ್ನು ಶಿಲೆಯಿಂದ ಬಿಡಿಸಿ
ಬೆಳಕಿಗೆ ತಂದು ಉಸಿರಿತ್ತ ಪುರಾತನರು!
ಎಲ್ಲಿ ಮಾಯವಾದರೋ ಯಾವ ಕಾಲದ ಎಂಥ ಕತ್ತಲಮರೆಗೆ! ದಿಕ್ಕಾ
ಪಾಲಾದರೋ ವಲಸೆ ಹೋಗಿ ಯಾವ ಕಾಣದ ನಾಡಿಗೆ? ಯಾವ ಕಾರಣಕೆ?
ಕಂಡವರಿಲ್ಲ. ಉಸಿರೆತ್ತುವ ಸ್ಥಿತಿಯಲ್ಲಿಲ್ಲ ಉಸಿರು ಪಡೆದವರೇ
ಕಲ್ಲು ಮೂರ್ತಿಯ ಹಾಗೆ ನಿಂತು ಬಿಟ್ಟಿದ್ದಾರೆ ಗಟ್ಟಿ ಅವುಡುಗಚ್ಚಿ


ಬ್ಯಾಂಡ್‌ಸ್ಟ್ಯಾಂಡಿನಲ್ಲೀಗ ಬರೇ ಎಣಿಸುವವರೇ ಹೆಚ್ಚು
ಕಂಡ್ಡದ್ದರಲ್ಲಿ ಕೈ ಹಚ್ಚಿದ್ದರಲ್ಲಿ ಅಂಕೆ ಹುಡುಕುವ ಹುಚ್ಚು
ಲಕ್ಷ ದಶಲಕ್ಷಗಳ ಮಗ್ಗಿಯೆಂದೋ ಮುಗಿಸಿ ಮನದ
ಪಾಟಿಯ ಮೇಲೆ ಕೋಟಿ ಅಬ್ಜಗಳ ಸಂಖ್ಯೆ ಗೀರುತ್ತಾರೆ
ಸಲೀಸಾಗಿ. ಕೈಬೆರಳಿನಲ್ಲೂ ಗುಣಿಸುತ್ತಾರೆ ಮೈಮರೆಯುತ್ತ
ಅಂಕೆಗಳೆದುರಿನ ಶೂನ್ಯ ಬೆಳೆವ ಪರಿಗೆ!

ತಾವೆ ಸೃಷ್ಟಿಸಿದ ಈ ಪೆಡಂಭೂತಕ್ಕೆ ಸಂಕೇತಕ್ಕೆ
ಕಲ್ಲನೂ ಮಣಿಸಿ ಸಂಖ್ಯೆಯಾಗಿಸುವ ಮತಿ ಶೂನ್ಯ
ಹವ್ಯಾಸಕ್ಕೆ ಒಡೆಯುತ್ತಾರೆ. ಮೊಳ ಕಂತ ತೂತು ಕೊರೆದು
ಬಂಡೆಯಲ್ಲಿ ಮದ್ದು ಜಡೆಯುತ್ತಾರೆ. ಫರ್ಲಾಂಗು ಉದ್ದ ಬತ್ತಿಗೆ
ಬೆಂಕಿಯಿಕ್ಕಿ ಕಿವಿ ಮುಚ್ಚಿ ಅವಿತು ಕುಳಿತಲ್ಲೇ ಬಂಡೆಯ
ಮರೆಗೆ ಲೆಕ್ಕಾ ಹಾಕುತ್ತಾರೆ ನಮ್ಮ ಕಾಲದ ಶೂರರು.

ಸಮುದ್ರ ತೀರದಲಿಂದು ಬರೀ ಸೀಳಿ ಸಿಡಿಯುವ ಸದ್ದು
ನಿಸ್ಸಹಾಯ ಆರ್ಭಾಟ ಚೀರಾಟ ಚಕ್ಕಾಚೂರು ಕಲ್ಲೊಡೆದು
ಹವಾಮಾನದಲ್ಲೆಲ್ಲ ಮಸ್ತಕಕೆ ಮತ್ತು ಹಿಡಿಸುವ ವಾಸನೆ ದಾಹ
ಮುವ್ವತ್ತು ಮಜಲುಗಳ ಗಗನ ಚುಂಬೀ ಸೌಧ ಎದ್ದು ಬರುವ
ಸೌದಾಗಿರೀ ಪರಾಕ್ರಮಕ್ಕೆ ಭದ್ರ ಬುನಾದಿ ಸಿದ್ಧಗೊಳ್ಳುವುಅ
ರುದ್ರ ರಭಸಕ್ಕೆ ಪುರಾತನ ಉದ್ಭವ ಶಿಲೆ ಛಿದ್ರ ವಿಚ್ಛಿದ್ರ.
ಬ್ಯಾಂಡ್‌ಸ್ಟ್ಯಾಂಡಿನ ಬಂಡೆಗಳೀಗ ಈ ಕಾರಣಕ್ಕೇ ಪ್ರಸಿದ್ಧ!


[ಬ್ಯಾಂಡ್‌ಸ್ಟ್ಯಾಂಡ್: ಮುಂಬಯಿಯ ಬಂದ್ರಾದಲ್ಲಿ ಒಂದು ಜನವಸತಿ]

Wednesday, February 13, 2008

ಬೆಟ್ಟ

ನಿಸ್ಸಿಂ ಎಸಿಕೆಲ್


[ಇಂಗ್ಲೀಷ್]


ಈ ಬೆಟ್ಟ
ಮಿಕ್ಕೆಲ್ಲ ಬೆಟ್ಟಗಳಂತೆ
ಹಿಡಿತಕೆ ಸಿಕ್ಕಂತೆಯೇ ಕಾಣುತ್ತದೆ
ದೂರದಲ್ಲಿ
ಮನದಲ್ಲಿ
ಅದನ್ನು ನಿರಾಕರಿಸುವ ಕೆಚ್ಚನ್ನು
ಜೀವಕಳೆದುಕೊಳ್ಳಲು ತಯಾರಾದಾಗ ಮಾತ್ರ ತೋರಬಹುದು.

ದೂರದಿಂದ ಬೆಟ್ಟವನೋಡಿ
ಮಂಡಿಗೆ ಹಾಕಬೇಡ
ದೂರವಿಲ್ಲವದು ಕಣ್ಣಿಗೆ
ದೂರವಿಲ್ಲ ಏರಲು
ದೂರವಿಲ್ಲ ಆಟವಾಡಲು

ಬೆಟ್ಟ ಬಯಸುವುದು
ಮಾನವನ ಶಕ್ತಿ
ತನ್ನೆಲ್ಲ ಅಂಕು ಡೊಂಕುಗಳಿಂದ
ಕಡಿದಾದ ಬಂಡೆಗಳಿಂದ
ಮೊಳೆತ, ಅರಳಿದ ವನ್ಯ ಹೂವುಗಳ
ಸೂರ್ಯನತ್ತ ನುಗ್ಗಿ ಮುನ್ನೆಡವ
ಕ್ಷಣದಲ್ಲಿ ಉರಿದು ಬಾಡುವ ಶಕ್ತಿ

ಇತರರಿಗೆ ಹೇಳಿದ್ದನ್ನು
ನನಗೆ ನಾನೇ ಎಷ್ಟುಬಾರಿ ಹೇಳಿಕೊಳ್ಳಬೇಕು:
ನಿನ್ನನ್ನೇ ನೀನು ನಂಬು -
ಹಾಸಿಗೆಯಲ್ಲಾದರೂ, ಮಾತಿನಲ್ಲಾದರೂ
ನಿನ್ನ ಲಯ ನಿನಗೆ ಸಿಗುವುದು

ಜೀವಕ್ಕೆ ಜೋತುಬೀಳುವುದನ್ನು
ಕಲಿತಾಗ
ಬದುಕೇನು?
ಅಸ್ತಿತ್ವವೇನು?
ನಾನು ಕವಿತೆಯ ಮಾತಾಡುತ್ತಿಲ್ಲ
ನಾನಾಡುತ್ತಿರುವುದು ದಿಟ್ಟತನದಿಂದ ಬದುಕುವ ಮಾತು
ಅದನ್ನು ನಾವು ಚಟುವಟಿಕೆ ಎಂದು ಕರೆಯಬಹುದು
ಆ ಚಟುವಟಿಕೆಯನ್ನೂ ಮಾಡಿ ಮುಗಿಸು
ಆ ಬೆಟ್ಟವನ್ನು ಪ್ರೀತಿಸದೇ ವಿಧಿಯಿಲ್ಲ

ಆ ಬೆಟ್ಟದ ಮೇಲೆ ನೀನಿಲ್ಲವೆಂಬ
ಅಸಹನೆ, ಸೇಡಿನ ಭಾವ ನಿನ್ನಲ್ಲಿರಲಿ
ಕರುಣೆಯಿರಬಹುದು ಆದರೂ
ನಿನ್ನನ್ನು ನೀನೇ ಇಲ್ಲಿ ಕ್ಷಮಿಸಬೇಡ
ಒಪ್ಪಿಗೆ ಅಥವಾ ಹತಾಶೆಗೆ ಕೈಚೆಲ್ಲಿ
ಆರಾಮವಾಗಿರಬೇಡ
ತಾನು ಸಾಯುತ್ತಿರುವಾಗ
ಮನುಷ್ಯ ನಗುತ್ತಿರುವುದಿಲ್ಲ
ಒಳ್ಳೆಯ ಸಾವಿನಲ್ಲಿ ನೀನು
ಮತ್ತೊಂದು ಕಾಲಘಟ್ಟಕ್ಕೆ ಯಾನ ಮಾಡುವೆ
ಅದುವೆ ಬೆಟ್ಟ
ನೀನೆಂದೆಂದೂ ಅರಿತಿದ್ದೆನೆಂದು ಭಾವಿಸಿದ್ದ
ಬೆಟ್ಟ