Tuesday, September 26, 2006

ಬರ್ಬರರ ನಿರೀಕ್ಷೆಯಲ್ಲಿ

ಸಿ.ಪಿ.ಕ್ಯವಫಿ
[ಗ್ರೀಕ್]
ಅನುವಾದ: ಬಿ.ಆರ್.ಲಕ್ಷ್ಮಣರಾವ್

ಯಾರಗಾಗಿ ಕಾಯುತ್ತಿದ್ದೇವೆ ನಾವು
ಮಾರುಕಟ್ಟೆಯಲ್ಲಿ ಸೇರಿ?

ಬರಲಿದ್ದಾರೆ ಇಂದು ಬರ್ಬರು.

ಸತ್ತಂತಿದೆಯೇಕೆ ಸಂಸತ್ತು?
ತೆಪ್ಪಗೆ ಕೂತಿದ್ದಾರೆ ಶಾಸಕರು?

ಬರಲಿದ್ದಾರೆ ಇಂದು ಬರ್ಬರರು.
ಬಂದ ಮೇಲೆ
ತಮ್ಮ ಶಾಸನಗಳ ತಾವೇ ರಚಿಸುವರು.

ಚಕ್ರವರ್ತಿಯೇಕೆ ಎದ್ದಿದ್ದಾನೆ ಇಷ್ಟು ಬೇಗ?
ಕೂತಿದ್ದಾನೆ ನಗರದ ಮಹಾದ್ವಾರದಲ್ಲಿ
ಸಿಂಹಾಸನದ ಮೇಲೆ
ಮುಕುಟ ಪೀತಾಂಬರಧಾರಿಯಾಗಿ?

ಬರಲಿದ್ದಾರೆ ಇಂದು ಬರ್ಬರರು.
ಕಾದಿದ್ದಾನೆ ಚಕ್ರವರ್ತಿ
ಅವರ ಮುಖಂಡನನ್ನು ಸ್ವಾಗತಿಸಲು,
ಸತ್ಕರಿಸಲು
ಬಿನ್ನವತ್ತಳೆ ಬಿರುದು ಬಾವಲಿ ನೀಡಿ.
ಸಿಂಗಾರಗೊಂಡು ಹೊರಟಿದ್ದಾರೇಕೆ
ನಮ್ಮ ದಂಡಾಧಿಕಾರಿ ದ್ವಯರು
ರಂಗು ರಂಗು ಚಿತ್ತಾರಗಳ
ಉತ್ತರೀಯ ತೂಗಿ,
ಝಗಝಗ ನವ ರತ್ನ ಖಚಿತ
ಉಂಗುರ, ಕೈ ಕಡಗ, ಕವಚ,
ಭುಜ ಕೀರ್ತಿಗಳ ಮೆರೆದು?

ಬರಲಿದ್ದಾರೆ ಇಂದು ಬರ್ಬರರು
ಅವರ ಕಣ್ಣು ಕೋರೈಸುವುದು
ಇಂಥ ಒಡವೆ ತೊಡವು.

ನಮ್ಮ ಸನ್ಮಾನ್ಯ ವಾಗ್ಮಿಗಳೆಲ್ಲಿ ಪತ್ತೆಯಿಲ್ಲ
ತಮ್ಮ ಮಾಮೂಲು ಪರಾಕು ಮೊರೆಯಲು?

ಬರಲಿದ್ದಾರೆ ಇಂದು ಬರ್ಬರರು,
ಅವರಿಗೆ ಭೈರಿಗೆ ಎಂದರಾಗದು.

ಇದ್ದಕ್ಕಿದ್ದಂತೆ ಇದೇಕೆ ಚಡಪಡಿಕೆ, ಗೊಂದಲ?
ಜನರ ಮೋರೆಗಳೇಕೆ ಕಪ್ಪಿಟ್ಟಿವೆ?
ಹಾದಿ ಬೀದಿಗಳೆಲ್ಲ ಖಾಲಿಯಾಗುತ್ತಿವೆಯಲ್ಲ!
ಏಕೆ ಹಿಂತಿರುಗುತ್ತಿದ್ದಾರೆ ಮಂದಿ
ತಮ್ಮ ಮನೆಗಳಿಗೆ?

ಕತ್ತಲಿಳಿಯುತ್ತಿದೆ, ಬರ್ಬರರು ಬರಲಿಲ್ಲ,
ಸುದ್ದಿ ಬಂದಿದೆ ನಮ್ಮ ಗಡಿಗಳಿಂದ
ಎಲ್ಲೂ
ಇಂದು ಬರ್ಬರರೇ ಇಲ್ಲವೆಂದು.

ಬರ್ಬರರೇ ಇಲ್ಲವೇ? ಅಯ್ಯೋ
ಇನ್ನೇನು ನಮ್ಮ ಗತಿ?
ಅವರಾದರೂ ಪರಿಹಾರದಂತಿದ್ದರು ನಮಗೆ
ಒಂದು ರೀತಿ!!

No comments: