Friday, March 09, 2007

ಹಳಿಗಳ ಮೇಲೆ

ಜಯಂತ ಕಾಯ್ಕಿಣಿ

[ಕನ್ನಡ]

ಹಳಿಯ ಮೇಲೆ ಕೂತಿದ್ದಾಳೆ ಅವಳು ತುಂಡು
ವಸ್ತ್ರದಲ್ಲಿ ಕಬ್ಬಿಣದ ಬಾಲ್ಟಿಯಿಂದ ನೀರೆರೆಯುತ್ತಾ ತಲೆಗೆ
ತಿಕ್ಕುತ್ತ ತುಂಡು ಅವಯವ ಸುರಿಯುವ ಮಳೆಯಲ್ಲಿ
ಎರಡೂ ಕಡೆ ಸದ್ದಿಲ್ಲದೆ ಬಂದು ಗಕ್ಕನೆ ನಿಂತಿವೆ
ಜನದಟ್ಟಣೆಯ ಧಡೂತಿ ರೈಲುಗಳು. ಡಬ್ಬಿ ತುಂಬ
ಕಂಬಿ ಹಿಡಿದು ಕೋಳಕ್ಕೆ ಜೋತ ಕೈಗಳು

ಎತ್ತಿದ ಅವಳ ಕಂಕುಳಿಂದ ಹೊರಬಿದ್ದಿದೆ ಹುಲಿಮರಿ
ಅತ್ತಿತ್ತ ಸುಳಿದು ನೆಕ್ಕುತ್ತ ಅವಳ ಬಡ ತೊಡೆಯ
ಕಾಯುತ್ತಿವೆ. ಸಣ್ಣ ಡಬ್ಬಗಳಲ್ಲಿ ಪರ್ಜನ್ಯ ಹಿಡಿದು
ಇದೇ ಹಳಿಗುಂಟ ಕೂತಿದ್ದಾರೆ ಗಂಡಸರು ತಲೆ ಎತ್ತಿ
ಉರಿವ ಮರ್ಮಾಂಗಗಳ ಹಿಡಿದು

ಹಳಿಗಳಲ್ಲಿ ಧ್ವನಿ ಇಲ್ಲ. ಬದಲಿಗೆ ಚಕ್ರಗಳ ಮೇಲೆ ಕಾದು ನಿಂತ
ಪಟ್ಟಣದ ನಿರ್ಲಜ್ಜ ಕಂಪನ. ಸಹಸ್ರಾರು ಮೈಲು ಓಡುತ್ತ
ಬಂದು ಹೆಸರು ಮರೆತು ನಿಂತವರ ಎದೆಗೆ
ಗೋಪುರದ ಗಡಿಯಾರ ಢಣಢಣ ಗುಂಡಿಕ್ಕಿದಂತೆ.
ಇವರ ಪ್ರಾಂತ ಎಲ್ಲಿ, ಕಾಲ ಎಲ್ಲಿ, ಮುಂಡು ಕೊಡವಿ ಎದ್ದವರು
ಹೀಗೇ ಈ ಇವಳ ತುಂಡು ಮೊಲೆಯಷ್ಟೇ ಹಗುರಾಗಿ
ತಲೆ ಕೊಡುವರು ಹಳಿಗೆ

ಮಳೆಗೆ ವಿದ್ಯುತ್ ತಂತಿಯ ಕಾಗೆ ತೊಟ್ಟು ತೊಟ್ಟಾಗಿ
ಕರಗಿ ಉರಿವ ಕಣ್ಣಿಗೆ ಇಳಿದ ಕಾಡಿಗೆ
ಕೈಕಾಲು ಅಲ್ಲಾಡದೆ ಸೆಟೆದು ಛತ್ರಿಯಂತೆ ಒತ್ತಿನಿಂತ ದೇಹಗಳ
ಡಬ್ಬಿಯ ಹೊರಗೆ ಹುಲಿಮರಿಗಳು ಓಡಿವೆ ಹಳಿಯುದ್ದಕ್ಕೂ
ಮೂಸುತ್ತ ಸರವಾಸನೆ.
ಚಲಿಸುವಂತಿಲ್ಲ ಏನೂ ಈಗ
ಇವಳ ಅಭ್ಯಂಜನ ಮುಗಿವ ತನಕ, ಮುಗಿಯಿತೋ
ಘಮಘಮಿಸುವ ಅವಳನ್ನು ಹಳಿಗಳ ಮೇಲೇ ಮಲಗಿಸಿ
ಒಬ್ಬೊಬ್ಬರಾಗಿ ಎಲ್ಲರೂ ಹರಿದು ಹೋಗುವ ತನಕ

Wednesday, March 07, 2007

ಸಮುದ್ರ

ವರವರರಾವು


[ತೆಲುಗು]
ಐದು ಖಂಡಗಳಿಂದ
ನಾಲ್ಕೂ ದಿಕ್ಕುಗಳಿಂದ
ಓಡೋಡಿ ಬಂದೆವು
ಉದಯಿಸುವ ಸೂರ್ಯನೇ
ಅಲೆಯಂತೆ ಎದ್ದೆವು
ಉದಯಿಸುವ ಸೂರ್ಯನೇ
ಚಳವಳಿಯ ತಂದೆವು
ಉದಯಿಸುವ ಸೂರ್ಯನೇ

ಜಲಸಮುದ್ರಗಳು ನಾಲ್ಕೇ
ಜನಸಮುದ್ರಗಳೈದು